ಫ್ರಾನ್ಸಿಸ್ - ಪವಿತ್ರ ರೋಮನ್ ಸಾಮ್ರಾಜ್ಯದ ಕೆಲವು ಚಕ್ರವರ್ತಿಗಳ, ಫ್ರಾನ್ಸಿನ ಹಾಗೂ ಎರಡು ಸಿಸಿಲಿಗಳ ಕೆಲವು ದೊರೆಗಳ ಹೆಸರು.

ಪವಿತ್ರ ರೋಮನ್ ಚಕ್ರಾಧಿಪತಿಗಳು: ಫ್ರಾನ್ಸಿಸ್ I : (1708-65) ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯಾಗಿ 1745ರಲ್ಲಿ ಆಯ್ಕೆಯಾಗುವ ಮುನ್ನ ಈತ ಲೊರೇನಿನ ಡ್ಯೂಕ್ (1729-37) ಮತ್ತು ಟಸ್ಕನಿಯ ಗ್ರ್ಯಾಂಡ್ ಡ್ಯೂಕ್ (1737-65) ಆಗಿದ್ದ. ಟಸ್ಕನಿಯನ್ನು ಚೆನ್ನಾಗಿ ಆಳುತ್ತಿದ್ದ ಇವನು ರೋಮನ್ ಚಕ್ರಾದೀಪತ್ಯವನ್ನು ಸಮರ್ಪಕವಾಗಿ ಆಳಲಿಲ್ಲ. ಪತ್ನಿ ಮರಿಯ ತರೀಸಳ ಕೈಗೆ ಆಡಳಿತ ಸೂತ್ರಗಳನ್ನು ನೀಡಿದ್ದ. 1765ರಲ್ಲಿ ಇವನ ಮಗ ಎರಡನೆಯ ಜೋಸೆಫ್ ಚಕ್ರವರ್ತಿಯಾದ.
ಫ್ರಾನ್ಸಿಸ್ II : 1768-1835. ಎರಡನೆಯ ಲೀಯೊಪೊಲ್ಡನ ಮಗ. ತಂದೆಯ ಅನಂತರ ಚಕ್ರವರ್ತಿ, ಹಾಗೂ ಹಂಗರಿ ಬೊಹಿಮಿಯಗಳ ದೊರೆ ಆದ (1792). ಫ್ರೆಂಚ್ ಕ್ರಾಂತಿಕಾರಿ ಯುದ್ಧಗಳಲ್ಲಿ ಹಾಗೂ 1ನೆಯ ನೆಪೋಲಿಯನ್ನನ ವಿರುದ್ಧ ಯುದ್ಧಗಳಲ್ಲಿ ಒಟ್ಟು ನಾಲ್ಕು ಬಾರಿ (1797, 1801, 1805, 1809) ಪರಾಜಯಗೊಂಡ. 1804ರಲ್ಲಿ ಆಸ್ಟ್ರಿಯದ ಚಕ್ರವರ್ತಿಯೆಂಬ ಬಿರುದು ತಳೆದು ಅದರ 1ನೆಯ ಫ್ರಾನ್ಸಿಸ್ ಆದ. 1806ರಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯವನ್ನು ವಿಸರ್ಜಿಸಿದ. ತನ್ನ ಮಗಳಾದ ಮೇರಿ ಲೂಯಿಸಳನ್ನು ನೆಪೋಲಿಯನ್ನನಿಗೆ ಕೊಟ್ಟು ಮದುವೆ ಮಾಡಿದ (1810). ನೆಪೋಲಿಯನ್ನನ ವಿರುದ್ಧ ಹೊಸ ಮೈತ್ರಿಕೂಟಕ್ಕೆ 1813ರಲ್ಲಿ ಸೇರಿದ ವಿಯನ್ನ ಕಾಂಗ್ರೆಸ್ಸಿನ ಅಧ್ಯಕ್ಷತೆ ವಹಿಸಿದ್ದ (1814-15). ತನ್ನ ಮಂತ್ರಿ ಮೆಟರ್‍ಲಿಂಕನ ಜೊತೆಯಲ್ಲಿ ಪವಿತ್ರ ಮೈತ್ರಿಕೂಟ ಹಾಗೂ ಜರ್ಮನ್ ಮಹಾಸಂಘದಲ್ಲಿ ತುಂಬ ಪ್ರಭಾವಶಾಲಿಯಾಗಿದ್ದ.

ಫ್ರಾನ್ಸಿನ ದೊರೆಗಳು: ಫ್ರಾನ್ಸಿಸ್ I : 1494-1547. 12ನೆಯ ಲೂಯಿಯ ಅಳಿಯ. 1515-47ರಲ್ಲಿ ಆಳಿದ. ಇಟಲಿ ಯುದ್ಧಗಳನ್ನು ಪುನರಾರಂಭಿಸಿ 1519ರಲ್ಲಿ ಜಯಗಳಿಸಿದ. ಪವಿತ್ರ ರೋಮನ್ ಚಕ್ರಾಧಿಪತ್ಯದ ಒಡೆತನಕ್ಕಾಗಿ 5ನೆಯ ಚಾಲ್ರ್ಸ್‍ನೊಂದಿಗೆ ಸೆಣಸಿ ಸೋತ. 1521ರಲ್ಲಿ ಚಾಲ್ರ್ಸ್‍ನ ವಿರುದ್ಧ ಯುದ್ಧಮಾಡಿ ಭಾರಿ ಸೋಲನನುಭವಿಸಿ ಸೆರೆಯಾದ . ಮೆಡ್ರಿಡ್ ಕೌಲಿಗೆ (1526) ಸಹಿ ಹಾಕಿ ಸ್ವಾತಂತ್ರ್ಯಪಡೆದ. ಫ್ರಾನ್ಸಿಸ್ ಹಿಂದಿನ ವೈಭವ ಪಡೆಯಲು ಮತ್ತೆ ಎರಡು ಸಲ ಯುದ್ಧ ಮಾಡಿ ಎರಡು ಸಲವೂ ಸೋತ. ಫ್ರಾನ್ಸಿಸ್ ಅನೀತಿವಂತ, ದುಂದುಗಾರ, ಆದರೆ ಕಲೆ ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡಿದ್ದು ಇವನ ದೊಡ್ಡ ಸಾಧನೆ. ಡವಿಂಚಿ, ಸೆಲಿನಿ, ರ್ಯಾಬೆಲೇ ಮುಂತಾದವರು ಇವನ ಆಶ್ರಯ ಪಡೆದಿದ್ದರು.

ಫ್ರಾನ್ಸಿಸ್ II : 1544-60. ಎರಡನೆಯ ಹೆನ್ರಿಯ ಮಗ. 1559-60ರಲ್ಲಿ ಆಳಿದ. ಸ್ಕಾಟರ ರಾಣಿ ಮೇರಿಯನ್ನು 1558ರಲ್ಲಿ ಮದುವೆಯಾದ. ರಾಜ್ಯದ ಸೂತ್ರಗಳು ಚಾಲ್ರ್ಸ್ ಮತ್ತು ಫ್ರಾಂಚಿಯ್ ಡಿ ಗೈಸರಿಗೆ ಕೊಟ್ಟಿದ್ದ. ಪ್ರಾಟೆಸ್ಟೆಂಟರು ಇವನಿಗೆ ವಿರೋಧರಾಗಿದ್ದರು.

ಎರಡು ಸಿಸಿಲಿಯ ದೊರೆಗಳು : ಫ್ರಾನ್ಸಿಸ್ I : 1777-1830 ಒಂದನೆಯ ಫರ್ಡಿನೆಂಡನ ಮಗ, ನೇಪಲ್ಸ್‍ನಲ್ಲಿ 1777 ಆಗಸ್ಟ್ 14ರಂದು ಜನಿಸಿದ. 1797ರಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿ ಎರಡನೆಯ ಲೀಯೊ ಪೊಲ್ಡ್‍ನ ಮಗಳು ಮರಿಯ ಕ್ಲಿಮೆಂಟಿನಳನ್ನು ಮದುವೆಯಾದ. 1802ರಲ್ಲಿ ಸ್ಪೇನಿನ ದೊರೆ ನಾಲ್ಕನೆಯ ಚಾಲ್ರ್ಸ್‍ನ ಮಗಳು ಇಸಬೆಲಳನ್ನು ಮದುವೆಯಾದ. ದೊರೆಯಾದ ಬಳಿಕ ಇವನಲ್ಲಿ ಹೆದರಿಕೆ ಪ್ರವೃತ್ತಿ ಹೆಚ್ಚಾಗಿ ಹೇಡಿ ಮನೋಭಾವ ತೋರಿದ ಪ್ರತಿಗಾಮಿ 1825 ರಿಂದ 1830ರ ತನಕ ಆಳಿದ. ಇವನದು ಭ್ರಷ್ಟ ಆಡಳಿತ.

	ಫ್ಸಾನ್ಸಿಸ್ II : 1836-94. ಇವನು 1859-60ರಲ್ಲಿ ಆಳಿದ. ಎರಡನೆಯ ಫರ್ಡಿನೆಂಡನ ಮಗ. ಧಾರ್ಮಿಕ ಕಟ್ಟುಕಟ್ಟಳೆಯಲ್ಲಿ ಬೆಳೆದು ಬಂದ. ಇವನ ಮೇಲೆ ಪ್ರಭಾವ ಬೀರಿದವರಲ್ಲಿ ಮುಖ್ಯಳಾದ ಬವೇರಿಯದ ಡಚೆಸ್ ಮರಿಯ ಸೋಫಿಯಳನ್ನೂ (1841-1925) 1859ರಲ್ಲಿ ಮದುವೆಯಾದ. ಸಿಸಿಲಿಯ ಪ್ರಜೆಗಳು ಬಂಡೆದ್ದಾಗ ಜೂಸೆಪ್ಪೆಗಾರಿಬಾಲ್ಡಿ ತನ್ನ ಸಾವಿರ ಮಂದಿ ಸೈನಿಕರೊಡನೆ ಬಂದು ಹೋರಾಡಿ ಫ್ಸಾನ್ಸಿಸ್‍ನ ಸೈನ್ಯವನ್ನು ಸೋಲಿಸಿ ಸಾರ್ಡೀನಿಯಾದ ದೊರೆ ವಿಕ್ಟರ್ ಎಮ್ಯಾನ್ಯುಯೆಲ್ಲನ ಹೆಸರಿನಲ್ಲಿ ಸಿಸಿಲಿದ್ವೀಪದ ಸರ್ವಾಧಿಕಾರಿಯೆಂದು ಘೋಷಿತನಾದ. ಇದೇ ಮುಂದೆ ಇಟಲಿಯ ಏಕೀಕರಣಕ್ಕೆ ಮಾರ್ಗವಾಯಿತು. ಫ್ರಾನ್ಸಿಸ್ ರೋಮಿಗೆ ಹೋಗಿ ಅನಂತರ ಪ್ಯಾರಿಸಿನಲ್ಲಿ ನೆಲೆಸಿ ತನ್ನ ಜೀವಿತವನ್ನು ಪ್ರವಾಸಗಳಲ್ಲಿ ಕಳೆದ.
(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ